ರಾತ್ರಿ ಟ್ಯೂಷನ್ ಮುಗಿಸಿ ಮನೆಗೆ ವಾಪಸ್ಸಾಗುತ್ತಿದ್ದ ಮಕ್ಕಳ ಮೇಲೆ ಹರಿದ ಗೂಡ್ಸ್ ವಾಹನ : ಇಬ್ಬರ ಸಾವು, ಮೂವರಿಗೆ ಗಂಭೀರ ಗಾಯ..!

ಜನಸ್ಪಂದನ ನ್ಯೂಸ್, ರಾಮನಗರ : ಬುಧವಾರ ರಾತ್ರಿ ಟ್ಯೂಷನ್ ಮುಗಿಸಿಕೊಂಡು ಮನೆಗೆ ವಾಪಸ್ಸಾಗುತ್ತಿದ್ದ ಐವರು ಮಕ್ಕಳ ಮೇಲೆ ಟಾಟಾ ಏಸ್ ಗೂಡ್ಸ್ ವಾಹನ ಹರಿದ ಪರಿಣಾಮ ಇಬ್ಬರು ಮಕ್ಕಳು ಮೃತಪಟ್ಟು, ಮೂವರಿಗೆ ಗಂಭೀರ ಗಾಯಗಳಾದ ಘಟನೆ ತಾಲ್ಲೂಕಿನ ಮಾಗಡಿ ರಸ್ತೆಯ ಗೊಲ್ಲರದೊಡ್ಡಿ ಗ್ರಾಮದಲ್ಲಿ ನಡೆದಿದೆ.

ಮೃತ ದುರ್ದೈವಿ ಮಕ್ಕಳನ್ನು ರೋಹಿನ್ (5) ಮತ್ತು ಶಾಲಿನಿ (8) ಎಂದು ಗುರುತಿಸಲಾಗಿದ್ದು, ಗಂಭೀರವಾಗಿ ಗಾಯಗೊಂಡ ಮಕ್ಕಳನ್ನು ಸುಚಿತ್, ಗೌತಮಿ ಹಾಗೂ ಲೇಖನ ಎಂದು ಗೊತ್ತಾಗಿದೆ. ಕೂಡಲೇ ಗಾಯಗೊಂಡ ಮಕ್ಕಳನ್ನು ರಾಮನಗರ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ಇಬ್ಬರನ್ನು ಬೆಂಗಳೂರಿನ ನಿಮ್ಹಾನ್ಸ್ ಆಸ್ಪತ್ರೆಗೆ ಸಾಗಿಸಲಾಗಿದೆ.

ಬುಧವಾರ ರಾತ್ರಿ 8ರ ಸುಮಾರಿಗೆ ಗ್ರಾಮದ ಮನೆಯೊಂದರಲ್ಲಿ ಟ್ಯೂಷನ್ ಮುಗಿಸಿಕೊಂಡು ಮನೆಗೆ ವಾಪಸ್ಸಾಗುತ್ತಿದ್ದ ಮಕ್ಕಳು ರಸ್ತೆ ದಾಟುತ್ತಿದ್ದಾಗ, ಮಾಗಡಿ ಕಡೆಯಿಂದ ವೇಗವಾಗಿ ಬಂದಿರುವ ಗೂಡ್ಸ್ ವಾಹನ ಚಾಲಕ ಮಕ್ಕಳ ಮೇಲೆ ಹರಿದಿದೆ ಎಂದು ರಾಮನಗರ ಗ್ರಾಮಾಂತರ ಠಾಣೆ ಪೊಲೀಸರು ತಿಳಿಸಿದರು.

ಸ್ಥಳೀಯರು ಅಪಘಾತವಾದ ತಕ್ಷಣ ಮಕ್ಕಳನ್ನು ಜಿಲ್ಲಾಸ್ಪತ್ರೆಗೆ ಕರೆದುಕೊಂಡು ಬಂದಿದ್ದಾರೆ. ದುರ್ದೈವಶಾತ್ ರೋಹಿನ್ ಮತ್ತು ಶಾಲಿನಿ ಬದುಕುಳಿಯಲಿಲ್ಲ. ಇನ್ನೂ ಘಟನೆ ಬಳಿಕ ಚಾಲಕ ಸ್ವಲ್ಪ ದೂರದಲ್ಲಿ ಗೂಡ್ಸ್ ವಾಹನವನ್ನು ಬಿಟ್ಟು ಪರಾರಿಯಾಗಿದ್ದಾನೆ ಎಂದು ತಿಳಿದುಬಂದಿದೆ.

ಸ್ಥಳಕ್ಕೆ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಟಿ.ವಿ. ಸುರೇಶ್ ಭೇಟಿ ನೀಡಿದ್ದಾರೆ. ಮುದ್ದು ಮಕ್ಕಳನ್ನು ಕಳೆದುಕೊಂಡ ಪಾಲಕರ ಆಕ್ರಂದನ ಮುಗಿಲು ಮುಟ್ಟಿತ್ತು.