ಜನಸ್ಪಂದನ ನ್ಯೂಸ್, ಬೆಂಗಳೂರು ಗ್ರಾಮಾಂತರ : ಜಿಲ್ಲೆಯ ನೆಲಮಂಗಲ ರಾಷ್ಟ್ರೀಯ ಹೆದ್ದಾರಿ 48ರ ತಿಪ್ಪಗೊಂಡನಹಳ್ಳಿ ಬಳಿ ಲಾರಿಗೆ ಹಿಂಬದಿಯಿಂದ ಬುಲೆರೊ ವಾಹನ ಡಿಕ್ಕಿಯಾದ ಪರಿಣಾಮ ಸ್ಥಳದಲ್ಲೇ ಇಬ್ಬರು ದುರ್ಮರಣಕ್ಕೀಡಾಗಿ, ಮೂವರು ಗಂಭೀರವಾಗಿ ಗಾಯಗೊಂಡ ಘಟನೆ ನಡೆದಿದೆ.
ಬುಲೆರೋದಲ್ಲಿದ್ದ ಕೇಶವ ರೆಡ್ಡಿ (45), ಶ್ರೀನಿವಾಸ್ (55) ಮೃತಪಟ್ಟಿದ್ದು, ಸೋಮಶೇಖರ್, ಬೋಡಿಯಪ್ಪ, ಮುನಿವೆಂಕಟಪ್ಪ ಎಂಬುವರಿಗೆ ಗಂಭೀರವಾದ ಗಾಯಗಳಾಗಿವೆ. ಗಾಯಾಳುಗಳನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಕೋಲಾರ ಜಿಲ್ಲೆ ಮುಳಬಾಗಿಲು ತಾಲೂಕು ಅಂಗೊಂಡಹಳ್ಳಿ ಗ್ರಾಮ ಪಂಚಾಯತಿ ಸದಸ್ಯೆ ಅಮರಾವತಿ ಅವರಿಗೆ ಅಧ್ಯಕ್ಷ ಪಟ್ಟ ಕಟ್ಟಲು ಪತಿ ಕೇಶವರೆಡ್ಡಿ 10 ಸದಸ್ಯರನ್ನು ಹೈಜಾಕ್ ಮಾಡಿದ್ದರು. ಸದಸ್ಯರು ಪ್ರವಾಸಿ ಮುಗಿಸಿ ಬರುವಾಗ ಅಪಘಾತ ಸಂಭವಿಸಿದ್ದು, ಈ ದುರ್ಘಟನೆಯಲ್ಲಿ ಕೇಶವರೆಡ್ಡಿ ಮೃತಪಟ್ಟಿದ್ದಾರೆ.
ಹತ್ತು ಜನ ಸದಸ್ಯರು ಬಾಂಬೆ, ಶಿರಡಿ ಪ್ರವಾಸ ಮುಗಿಸಿಕೊಂಡು ಮರಳಿ ನೆಲಮಂಗಲ ಬಳಿ ಫಾರಂ ಹೌಸ್ನಲ್ಲಿ ಉಳಿದುಕೊಂಡಿದ್ದರು. ಈ ಪೈಕಿ ಐದು ಜನ ಮಾತ್ರ ಫಾರಂ ಹೌಸ್ ನಿಂದ ಹೊರ ಬಂದಿದ್ದಾರೆ. ಈ ವೇಳೆ ನೆಲಮಂಗಲದ ಬೇಗೂರು ಬಳಿ ಅಪಘಾತ ಸಂಭವಿಸಿದೆ. ಮೂವರು ಸದಸ್ಯರಿಗೆ ಗಂಭೀರ ಗಾಯಗಳಾಗಿವೆ.
ಇನ್ನು ಕೇಶವರೆಡ್ಡಿ ಅತ್ತಿಗೆ ಅನಿತಾ ಕೂಡ ಗ್ರಾ.ಪಂ ಸದಸ್ಯರು ಹೀಗಾಗಿ ಇವರ ಜೊತೆ 8 ಜನ ಸದಸ್ಯರನ್ನು ಹೈಜಾಕ್ ಮಾಡಲಾಗಿತ್ತು. ಸುಬ್ಬರತ್ನ, ಸೀತಮ್ಮ, ಪ್ರೇಮ, ಅಶೋಕ್, ಸುಮಿತ್ರ, ಶಿವಶಂಕರ, ಸೋಮಶೇಖರ್, ಮುನಿವೆಂಕಟಪ್ಪ ಕಳೆದ 15 ದಿನದ ಹಿಂದೆಯೇ ಗ್ರಾಮ ತೊರೆದಿದ್ದರು.
ಇವರೆಲ್ಲರೂ ಜೆಡಿಎಸ್ ಬೆಂಬಲಿತರಾಗಿದ್ದು ಜೆಡಿಎಸ್ ತೆಕ್ಕೆಗೆ ಅಧ್ಯಕ್ಷ ಸ್ಥಾನ ಗಳಿಸುವ ಸಲುವಾಗಿ ಮೃತ ಕೇಶವರೆಡ್ಡಿ ಹೈಜಾಕ್ ಮಾಡಿಸಿದ್ದರು. ಇನ್ನೂ ಅಪಘಾತದ ವಿಷಯ ತಿಳಿಯುತ್ತಿದ್ದಂತೆ ಮುಳಬಾಗಿಲು ಶಾಸಕ ಸಮೃದ್ದಿ ಮಂಜುನಾಥ್ ಆಸ್ಪತ್ರೆಗೆ ದೌಡಾಯಿಸಿದ್ದಾರೆ.
ಹದಿನೇಳು ಜನ ಸದಸ್ಯರಿರುವ ಗ್ರಾಮ ಪಂಚಾಯಿತಿಗೆ ನಾಳೆ ಚುನಾವಣೆ ನಡೆಯಬೇಕಿತ್ತು. ಆದ್ರೆ ಅಪಘಾತ ಹಿನ್ನಲೆ ಇಂದು ಗ್ರಾಮ ಪಂಚಾಯ್ತಿ ಅಧ್ಯಕ್ಷ, ಉಪಾಧ್ಯಕ್ಷ ಚುನಾವಣೆ ಮುಂದೂಡಲಾಗಿದೆ.