ಜನಸ್ಪಂದನ ನ್ಯೂಸ್, ಬೆಂಗಳೂರು : ಬೆಂಗಳೂರಿನ ಸದಾಶಿವನಗರ ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯ ಎಂಎಸ್ ರಾಮಯ್ಯ ಬಳಿಯ ಇಸ್ರೋ ಸರ್ಕಲ್ನಲ್ಲಿ ಹಿಟ್ ಆ್ಯಂಡ್ ರನ್‌ಗೆ ಒಂದೇ ಕುಟುಂಬದ ಇಬ್ಬರು ಮೃತಪಟ್ಟಿದ್ದು, ಮತ್ತೋರ್ವನ ಸ್ಥಿತಿ ಗಂಭೀರವಾಗಿರುವ ಘಟನೆ ನಡೆದಿದೆ.
ಮೃತ ದುರ್ದೈವಿಗಳು ರಘು ಮತ್ತು ಚಿರಂಜೀವಿ ಎಂದು ತಿಳಿದುಬಂದಿದೆ. ವಾಸು ಎಂಬುವರ ಸ್ಥಿತಿ ಗಂಭೀರವಾಗಿದೆ
ಒಂದೇ ಕುಟುಂಬದ ಈ ಮೂವರು ಪುಸ್ತಕದ ವ್ಯಾಪಾರ ಮಾಡುತ್ತಿದ್ದರು. ಕಳೆದ ರಾತ್ರಿ ಕೆಲಸ ಮುಗಿಸಿ ಮನೆಗೆ ಹೋಗುತ್ತಿದ್ದರು. ಈ ವೇಳೆ ಎಂಎಸ್ ರಾಮಯ್ಯ ಅಸ್ಪತ್ರೆ ಕಡೆಯಿಂದ ಬಂದ ಮಾರುತಿ ಇಕೋ ಕಾರು, ನಿಂತಿದ್ದ ಕಾರು ಮತ್ತು ಆಟೋಗೆ ಡಿಕ್ಕಿ ಹೊಡೆದಿದೆ. ಬಳಿಕ ರಸ್ತೆ ಬದಿ ನಿಂತಿದ್ದ ವಾಸು ಅವರಿಗೆ ಗುದ್ದಿ, ತದನಂತರ ಡಿಯೋ ಸ್ಕೂಟರ್ನಲ್ಲಿದ್ದ ರಘು ಮತ್ತು ಚಿರಂಜೀವಿ ಅವರಿಗೆ ಡಿಕ್ಕಿ ಹೊಡೆದಿದೆ.
ಘಟನೆ ಬಳಿಕ ಸ್ಥಳೀಯರು ಕಾರು ತಡೆದು ನಿಲ್ಲಿಸಿದ್ದಾರೆ. ಈ ವೇಳೆ ಕಾರಿನಲ್ಲಿದ್ದ ಮೂವರ ಪೈಕಿ ಆಕಾಶ್ ಎಂಬುವರು ಕಾರಿನಿಂದ ಕೆಳಗೆ ಇಳಿದ್ದಿದ್ದು, ಉಳಿದ ಇಬ್ಬರು ಕಾರಿನ ಸಹಿತ ಎಸ್ಕೇಪ್ ಆಗಿದ್ದಾರೆ.
ಆಕಾಶ್ನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಆಕಾಶ್ ಮಾಗಡಿ ಜಿಲ್ಲಾ ಪಂಚಾಯತಿ ಸದಸ್ಯರ ಮಗ ಎಂದು ತಿಳಿದುಬಂದಿದೆ. ಘಟನೆ ಸಂಬಂಧ ಸದಾಶಿವನಗರ ಸಂಚಾರ ಪೊಲೀಸ್ ಠಾಣೆ ಯಲ್ಲಿ ಪ್ರಕರಣ ದಾಖಲಾಗಿದೆ.