ಜನಸ್ಪಂದನ ನ್ಯೂಸ್, ಡೆಸ್ಕ್ : ನರ್ಸ್ ಎಂಬ ಸೋಗು ಹಾಕಿಕೊಂಡು ಗರ್ಭಿಣಿ ಕೊಲೆ ಮಾಡಲು ಯತ್ನಿಸಿದ ಮಹಿಳೆಯನ್ನು ಬಂಧಿಸಿದ ಕೇರಳ ಪೊಲೀಸರು ಸದ್ಯ ಆಕೆಯನ್ನು ವಿಚಾರಣೆ ನಡೆಸುತ್ತಿದ್ದಾರೆ.
ಆರೋಪಿ ಮಹಿಳೆ ಅನುಷಾ ಎಂಬುವರು ಈ ಕೃತ್ಯ ಎಸಗಿದ್ದಾಳೆ. ಇನ್ನೂ ಈಕೆ ಹೀಗೆ ಮಾಡಲು ಕಾರಣ ಏನೆಂದರೆ, ಗರ್ಭಿಣಿ ಸ್ನೇಹಾಳ ಪತಿ ಅರುಣ್ ಮೇಲಿನ ಪ್ರೀತಿ. ಅರುಣ್ ಮತ್ತು ಅನುಷಾ ಕಾಲೇಜು ದಿನಗಳಿಂದಲೂ ಲವ್ ಮಾಡುತ್ತಿದ್ದರು ಎಂಬ ರಹಸ್ಯ ತನಿಖೆಯಲ್ಲಿ ಬಯಲಾಗಿದೆ. ಇನ್ನೂ ಸ್ನೇಹಾಳನ್ನು ಕೊಂದು ಅರುಣ್’ನನ್ನು ಪಡೆದುಕೊಳ್ಳುವುದು ತನ್ನ ದುರುದ್ದೇಶವಾಗಿತ್ತು ಎಂದು ಆರೋಪಿ ಹೇಳಿದ್ದಾಳೆ.
ಘಟನೆಯ ಹಿನ್ನೆಲೆ :
ಗರ್ಭಿಣಿ ಕೊಲೆಗೆ ಯತ್ನಿಸಿದ ಆರೋಪದ ಮೇಲೆ ಕಾಯಂಕುಲಂ ಪುಲ್ಲುಕುಳಂಗರ ಮೂಲದ ಅನುಷಾ (25) ಎಂಬುವರನ್ನು ಪೊಲೀಸರು ಬಂಧಿಸಿದ್ದಾರೆ. ಈಕೆ ಕಾಯಂಕುಲಂ ಕರಿಯಾಲ್ಕುಳಂಗರ ನಿವಾಸಿ ಅರುಣ್ ಎಂಬವರ ಪತ್ನಿ ಸ್ನೇಹಾ (24) ಅವರನ್ನು ಕೊಲೆ ಮಾಡಲು ಯತ್ನಿಸಿದ್ದಳು ಎಂದು ವರದಿಯಾಗಿದೆ.
ಆರೋಪಿ ಅನುಷಾ, ಸ್ನೇಹಾಳ ಪತಿ ಅರುಣ್ ಅವರ ಸ್ನೇಹಿತೆಯಾಗಿದ್ದಾಳೆ. ಆಸ್ಪತ್ರೆಯ ಸಿಬ್ಬಂದಿ ಮತ್ತು ಸ್ನೇಹಾಳ ತಾಯಿಯ ಅನುಮಾನವೇ ಆಕೆ ಜೀವ ಉಳಿಸುವಲ್ಲಿ ಕೆಲಸ ಮಾಡಿದೆ.
ನಾಲ್ಕು ದಿನಗಳ ಹಿಂದೆ ಸ್ನೇಹ ಹೆರಿಗೆಗಾಗಿ ಆಸ್ಪತ್ರೆಗೆ ದಾಖಲಾಗಿದ್ದರು. ನಿನ್ನೆ ಸಂಜೆ ಅನುಷಾ ನರ್ಸ್ ಸೋಗಿನಲ್ಲಿ ಆಸ್ಪತ್ರೆಗೆ ಬಂದಿದ್ದಾಳೆ. ಪ್ರಸವದ ನಂತರ ಚಿಕಿತ್ಸೆ ಪಡೆಯುತ್ತಿದ್ದ ಸ್ನೇಹಾಳ ಕೊಠಡಿ ತಲುಪಿದ ಅನುಷಾ, ಖಾಲಿ ಸಿರಿಂಜ್‌ನಿಂದ ಸ್ನೇಹಾಳ ರಕ್ತನಾಳಗಳಿಗೆ ಗಾಳಿಯನ್ನು ತುಂಬಿಸಿ ಕೊಲ್ಲಲು ಪ್ರಯತ್ನಿಸಿದ್ದಾಳೆ. ಫಾರ್ಮಸಿ ಓದಿರುವ ಅನುಷಾ ರಕ್ತನಾಳದಲ್ಲಿ ಗಾಳಿ ಸೇರಿದರೆ ಆಗಬಹುದಾದ ಅಪಾಯವನ್ನು ಮನಗಂಡು ಈ ಕ್ರೂರ ಕೃತ್ಯ ಎಸಗಿದ್ದಾರೆ ಎಂದು ವರದಿಯಾಗಿದೆ.
ಇನ್ನು ಸ್ನೇಹಾಗೆ ಆರೋಪಿತ ಮಹಿಳೆ ಅನುಷಾ ನಾಲ್ಕು ಬಾರಿ ಸಿರಿಂಜ್ ಚುಚ್ಚಿದ್ದಾರೆ. ಏರ್ ಇಂಜೆಕ್ಷನ್ ನಂತರ ಸ್ನೇಹಾ ಅವರಿಗೆ ಹೃದಯಾಘಾತವಾಗಿದೆ.
ಕೊಠಡಿಯಿಂದ ಹೊರಬಂದಾಗ ಸ್ನೇಹಾಳ ತಾಯಿ ಆರೋಪಿಯನ್ನು ನೋಡಿ ಸಂಶಯಗೊಂಡು ಆಕೆಯನ್ನು ತಡೆದಿದ್ದಾರೆ. ಬಳಿಕ ಸ್ನೇಹಾಳ ತಾಯಿ ನರ್ಸಿಂಗ್ ಸಿಬ್ಬಂದಿಗೆ ಮಾಹಿತಿ ಮುಟ್ಟಿಸಿದ್ದಾರೆ. ನರ್ಸ್ಗಳು ಹಿರಿಯ ವೈದ್ಯಾಧಿಕಾರಿಗಳ ಗಮನಕ್ಕೆ ತಂದರು. ಕೂಡಲೇ ಆಸ್ಪತ್ರೆಯ ಅಧಿಕಾರಿಗಳು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಘಟನಾ ಸ್ಥಳಕ್ಕೆ ಪೊಲೀಸರು ಆಗಮಿಸಿ ಆರೋಪಿತ ಮಹಿಳೆಯನ್ನು ವಶಕ್ಕೆ ಪಡೆದಿದ್ದಾರೆ.