ತಿರುಪತಿ ಬಳಿ ಚಲಿಸುತ್ತಿದ್ದ ರೈಲಿನಲ್ಲಿ ರಾಜ್ಯದ 38 ಪ್ರಯಾಣಿಕರ ಮೇಲೆ ಹಲ್ಲೆ.!

ಜನಸ್ಪಂದನ ನ್ಯೂಸ್, ಡೆಸ್ಕ್ : ಚಲಿಸುತ್ತಿದ್ದ ರೈಲಿನಲ್ಲಿ ಸೀಟ್ ವಿಚಾರಕ್ಕೆ ರಾಜ್ಯದ 38 ಪ್ರಯಾಣಿಕರ ಮೇಲೆ ಆಂಧ್ರದ ವ್ಯಕ್ತಿಗಳಿಂದ ಹಲ್ಲೆ ನಡೆದಿದೆ ಎಂಬ ಆರೋಪ ಕೇಳಿಬಂದಿದೆ.

ತಿರುಪತಿ ಬಳಿ ಈ ಘಟನೆ ನಡೆದಿದ್ದು, ಮೈಸೂರಿನಿಂದ 220 ಮಂದಿ ಆಂಧ್ರದ ತಿರುಪತಿಗೆ ತೆರಳಿದ್ದರು ಎನ್ನಲಾಗಿದೆ. ತಿರುಪತಿಯಿಂದ ಮರಳಿ ರೈಲಿನಲ್ಲಿ ಬರುವಾಗ ಸೀಟ್ ವಿಚಾರಕ್ಕೆ ಗಲಾಟೆಯಾಗಿದ್ದು, ರಾಜ್ಯದ ಪ್ರಯಾಣಿಕರ ಮೇಲೆ ಹಲ್ಲೆ ನಡೆದಿದೆ.

ಆಂಧ್ರಪ್ರದೇಶ ಮೂಲದ ವ್ಯಕ್ತಿಗಳು ಮೈಸೂರಿನ ಪ್ರಯಾಣಿಕರಿಗೆ ಮನಬಂದಂತೆ ಥಳಿಸಿದ್ದಾರೆ. ಸೀಟ್ ಮೇಲಿಟ್ಟಿದ್ದ ಲ್ಯಾಪ್ ಟಾಪ್ ಮೇಲೆ ಕುಳಿತಿದ್ದೀರಾ ಎಂದು ಗಲಾಟೆ ನಡೆದಿದ್ದು ಮಾತಿಗೆ ಮಾತು ಬೆಳೆದು ಗಲಾಟೆ ಕೈ ಕೈ ಮಿಲಾಯಿಸುವ ಹಂತಕ್ಕೆ ಹೋಗಿದೆ.

ಈ ವೇಳೆ ಆಂಧ್ರ ಮೂಲದವರು ಜನರನ್ನು ಕರೆಸಿ ಹಲ್ಲೆ ಮಾಡಿಸಿದ್ದಾರೆ. ಪೊಲೀಸರನ್ನು ಕರೆದರೂ ಸಹ ಸಹಾಯಕ್ಕೆ ಬರಲಿಲ್ಲ. ಪೊಲೀಸರಿಗೆ ನಾವು ದೂರು ಕೊಟ್ಟರೂ ನಮ್ಮನ್ನೆ ಅಪರಾಧಿಗಳಂತೆ ಪ್ರಶ್ನೆ ಮಾಡಿದರು. ಹಲ್ಲೆ ಮಾಡಿದ ವಿಡಿಯೋ ಚಿತ್ರೀಕರಿಸಿದ್ದಕ್ಕೆ ಮೊಬೈಲನ್ನು ಕಿತ್ತುಕೊಂಡಿದ್ದಾರೆ.

ಅಲ್ಲಿನ ಜನ ತಮ್ಮ ಬಳಿ ಡ್ರಾಗರ್ ಹಾಗೂ ಚಾಕು ಸೇರಿದಂತೆ ಮಾರಕಾಸ್ತ್ರಗಳನ್ನು ಇಟ್ಟುಕೊಂಡಿದ್ದು ಅದರಲ್ಲೇ ಹಲ್ಲೆ ಮಾಡಿದ್ದಾರೆ ಎಂದು ಪ್ರಯಾಣಿಕರು ಆರೋಪಿಸಿದ್ದಾರೆ. ಸದ್ಯ ಮೈಸೂರು ರೈಲ್ವೆ ಪೊಲೀಸರಿಗೆ ದೂರು ನೀಡಲು ಮುಂದಾಗಿದ್ದಾರೆ ಎಂದು ತಿಳಿದುಬಂದಿದೆ.