ಮೊಹರಂ ನಿಮಿತ್ಯ ಹಾಕಿದ ನಿಗಿನಿಗಿ ಕೆಂಡದಲ್ಲಿ‌ ಕಂಬಳಿ‌ ಹಾಸಿ‌ ಕುಳಿತ ವ್ಯಕ್ತಿ.!

ಜನಸ್ಪಂದನ ನ್ಯೂಸ್, ವಿಜಯಪುರ : ವಿಜಯಪುರ ‌ಜಿಲ್ಲೆ‌ಯ ಮುದ್ದೇಬಿಹಾಳ ತಾಲೂಕಿನ ಅಮರಗೋಳ‌ ಗ್ರಾಮದಲ್ಲಿ ಇಂದು‌ ನಸುಕಿನ ಜಾವ ಅಲಾಯಿ‌ ದೇವರ ಎದುರುಗೆ ಹಾಕಿದ‌‌ ಕೆಂಡದ ಮೇಲೆ ವ್ಯಕ್ತಿ ಕಂಬಳಿ‌ ಹಾಸಿ ಕುಳಿತ ಘಟನೆ ನಡೆದಿದೆ.

ಗ್ರಾಮದ ಯಲ್ಲಾಲಿಂಗ ಹಿರೇಹಾಳ ಎಂಬಾತ ದೇವರ ಎದುರಿಗೆ ಹಾಕಿದ ಕೆಂಡದಲ್ಲಿ ಕಂಬಳಿ ಹಾಸಿ ಕುಳಿತಿದ್ದಾನೆ. ಹೀಗೆ ಕೆಲ ಕ್ಷಣಗಳ ಕಾಲ ಕೆಂಡದಲ್ಲಿ ಕುಳಿತು ಭಕ್ತಿಯ ಪರಾಕಾಷ್ಠೆ ಮೆರೆದಿದ್ದಾನೆ.

ಅಷ್ಟೇ ಅಲ್ಲದೆ ಬರಿಗೈಲಿ ಕೆಂಡದುಂಡೆಗಳನ್ನು ಹಿಡಿದು ದೇವರಿಗೆ ಕೆಂಡದಾರುತಿ ಬೆಳಗಿದ್ದಾನೆ. ಇಷ್ಟಾದರೂ ಯಲ್ಲಾಲಿಂಗ ಏನೂ ಆಗೇ ಇಲ್ಲವೆಂಬಂತೆ ಇರುವುದನ್ನು ಕಂಡು ಗ್ರಾಮಸ್ಥರು ಬೆಕ್ಕಸ ಬೆರಗಾಗಿದ್ದಾರೆ.

ಬೆಂಕಿ ಮೇಲೆ‌ ಕುಳಿತರೂ ಕೈಯಿಂದ ಬೆಂಕಿ ಹಿಡಿದರೂ ಯಲ್ಲಾಲಿಂಗನಿಗೆ ಯಾವುದೇ ಸುಟ್ಟ ಗಾಯವಾಗಿಲ್ಲ. ಯಲ್ಲಾಲಿಂಗನ ಭಕ್ತಿಯ ಪರಾಕಾಷ್ಠೆಗೆ ಗ್ರಾಮಸ್ಥರು ಅಚ್ಚರಿಗೊಂಡಿದ್ದಾರೆ.

ಅಲ್ಲದೇ ಇದು ಅಲಾಯಿ ದೇವರ ಪವಾಡವೆಂದು‌ ಗ್ರಾಮಸ್ಥರು ಮಾತನಾಡಿಕೊಳ್ಳುತ್ತಿದ್ದಾರೆ.