ಜನಸ್ಪಂದನ ನ್ಯೂಸ್, ಡೆಸ್ಕ್ : ಮೊಹರಂ ಹಬ್ಬದ ನಿಮಿತ್ತ ಶೋಕ ಮೆರವಣಿಗೆ ಹೋಗುತ್ತಿದ್ದ ಜನರಿಗೆ ವಿದ್ಯುತ್ ತಂತಿ ತಗುಲಿ ನಾಲ್ವರು ಮೃತಪಟ್ಟು, 13 ಜನರು ಗಾಯಗೊಂಡಿರುವ ಘಟನೆ ಜಾರ್ಖಂಡ್ನ ಬೊಕಾರೋದಲ್ಲಿ ನಡೆದಿದೆ.
ಬೊಕಾರೊ ಜಿಲ್ಲೆಯ ಪೀಟರ್‌ವಾರ್ ಬ್ಲಾಕ್‌ನ ಖೆಟ್ಕೊ ಗ್ರಾಮದಲ್ಲಿ ಮೊಹರಂ ಮೆರವಣಿಗೆ ಹೊತ್ತೊಯ್ಯುತ್ತಿದ್ದ ತಾಜಿಯಾ ಹೈಟೆನ್ಷನ್ ವಿದ್ಯುತ್ ತಂತಿಗೆ ತಗುಲಿ ಈ ದುರಂತ ನಡೆದಿದೆ. ಗಾಯಗೊಂಡವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಅವರಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಇದರಲ್ಲಿ ಮೂವರ ಸ್ಥಿತಿ ಗಂಭೀರವಾಗಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಇನ್ನೂ ಸ್ಥಳಕ್ಕೆ ಧಾವಿಸಿದ ಬೊಕಾರೊನ ಪೊಲೀಸ್ ವರಿಷ್ಠಾಧಿಕಾರಿ ಪ್ರಿಯದರ್ಶಿ ಅಲೋಕ್ ಅವರು ಈ ಬಗ್ಗೆ ತನಿಖೆ ನಡೆಸಲಾಗಿದ್ದು, ಘಟನೆಯ ಬಗ್ಗೆ ವರದಿ ಪಡೆಯಲಾಗಿದೆ ಎಂದು ಹೇಳಿದ್ದಾರೆ.
ಇಂದು ಬೆಳಿಗ್ಗೆ ಸುಮಾರು 6 ಗಂಟೆಗೆ ಮೊಹರಂ ಮೆರವಣಿಗೆ ಪ್ರಾರಂಭವಾಗಿತ್ತು. ಮುಸ್ಲಿಂ ಸಮುದಾಯದ ಧ್ವಜ 11,000 ವೋಲ್ಟ್ ಹೈ-ಟೆನ್ಶನ್ ವಿದ್ಯುತ್ ತಂತಿಗೆ ತಗುಲಿದ ಕಾರಣ ಈ ಘಟನೆ ನಡೆದಿದೆ ಎಂದು ಹೇಳಿದ್ದಾರೆ ಎಂದು ವರದಿಯಿಂದ ತಿಳಿದುಬಂದಿದೆ.
ವಿದ್ಯುತ್ ಅವಘಡದ ವೇಳೆ ಮೆರವಣಿಗೆಯಲ್ಲಿ ವಿದ್ಯುತ್ ಸರಬರಾಜಿಗೆ ಇಡಲಾಗಿದ್ದ ಬ್ಯಾಟರಿ ಕೂಡ ಸ್ಫೋಟಗೊಂಡಿದೆ ಎಂದು ವರದಿಯಾಗಿದೆ.