ಜನಸ್ಪಂದನ ನ್ಯೂಸ್, ಡೆಸ್ಕ್ : ಬ್ಯಾಂಕ್ (Bank) ಸಿಬ್ಬಂದಿಗಳು ಅಂತ ಹೇಳಿಕೊಂಡು ‘ಸರ್ ನಿಮಗೆ ಕ್ರೆಡಿಟ್ ಕಾರ್ಡ್ ಬೇಕಾ? ಬ್ಯಾಂಕ್ ಲೋನ್ ಬೇಕಾ? ಕಾರನ್ನು ಖರೀದಿ ಮಾಡುವುದಕ್ಕೆ ಕಾರ್ ಲೋನ್ ಬೇಕಾ?’ ಎಂದು ಕರೆ ಮಾಡಿ ಕೇಳುತ್ತಾರೆ.
ಎಷ್ಟೋ ಬಾರಿ ಯಾವುದೇ ಲೋನ್ ಬೇಡ ಅಂದರೂ ಸಹ ಮತ್ತೆ ಮತ್ತೆ ಕರೆ ಮಾಡುತ್ತಿರುತ್ತಾರೆ. ಎಷ್ಟು ಸಲ ಹೇಳಿದರೂ ಸಹ ಬೇರೆ ಬೇರೆ ಸಂಖ್ಯೆಗಳಿಂದ ಕರೆಗಳು ಹಾಗೆಯೇ ಬರುತ್ತಲೇ ಇರುತ್ತವೆ.
ಹೀಗೆ ಬ್ಯಾಂಕ್ ಉದ್ಯೋಗಿಯೊಬ್ಬರು ಕರೆ ಮಾಡಿದ್ದಕ್ಕೆ ವ್ಯಕ್ತಿಯೊಬ್ಬ, ಸಾಲ ಬೇಕು, ಅದು ಸಹ ರೈಲು ಖರೀದಿಸಲು 300 ಕೋಟಿ ರೂಪಾಯಿ ಸಾಲ ಬೇಕು ಅಂತ ಹೇಳಿದ್ದಾರೆ. ಹೀಗೆ ಕೇಳಿದ್ದಕ್ಕೆ ಕರೆ ಮಾಡಿದ ಯುವತಿ ಇದನ್ನು ಕೇಳಿ ಏನು ಮಾತನಾಡುವುದು ಅಂತ ಸುಮ್ಮನಾಗಿದ್ದಾರೆ.
ಇನ್‌ಸ್ಟಾಗ್ರಾಮ್ ನಲ್ಲಿ ಹಂಚಿಕೊಂಡ ಆಡಿಯೋದಲ್ಲಿ, ನಿಶಾ ಎಂಬ ಬ್ಯಾಂಕ್ ಉದ್ಯೋಗಿ ಸಾಲ ತೆಗೆದುಕೊಳ್ಳಲು ಬಯಸುತ್ತೀರಾ ಸಾರ್ ಎಂದಾಗ, ರೈಲು ಖರೀದಿಸಲು 300 ಕೋಟಿ ರೂಪಾಯಿಗಳ ಸಾಲವನ್ನು ತೆಗೆದುಕೊಳ್ಳಲು ಬಯಸುತ್ತೇನೆ ಎಂದು ಕರೆ ಸ್ವೀಕರಿಸಿದ ವ್ಯಕ್ತಿ ಉತ್ತರಿಸುತ್ತಾನೆ.
ವಿನಂತಿಯನ್ನು ಕೇಳಿದ ನಂತರ ಏನು ಹೇಳುವುದು ಅಂತ ತೋಚದ ಬ್ಯಾಂಕ್ ಉದ್ಯೋಗಿ ಸ್ವಲ್ಪ ಸಮಯದ ನಂತರ ಆ ವ್ಯಕ್ತಿಯನ್ನು ಈ ಹಿಂದೆ ಏನಾದರೂ ಸಾಲ ತೆಗೆದುಕೊಂಡಿದ್ದೀರಾ ಸಾರ್ ಎಂದು ಕೇಳಿದಳು. ಹೀರೋ ಸೈಕಲ್ ಖರೀದಿಸಲು ಈ ಹಿಂದೆ 1,600 ರೂಪಾಯಿ ಸೈಕಲ್ ಲೋನ್ ಪಡೆದಿದ್ದೆ ಅಂತ ಮತ್ತೆ ತಮಾಷೆ ಮಾಡಿದ್ದಾರೆ.
ತಮಾಷೆಯಾಗಿರುವ ಈ ಆಡಿಯೋಗೆ ಹಲವಾರು ಪ್ರತಿಕ್ರಿಯೆಗಳು ಬಂದಿವೆ. ‘ಬ್ಯಾಂಕ್ ಉದ್ಯೋಗಿಗಳು ನಿಮ್ಮ ಕರೆಗಳನ್ನು ನಿರ್ಬಂಧಿಸುವ ರೀತಿಯಲ್ಲಿ ಸಾಲವನ್ನು ತೆಗೆದುಕೊಳ್ಳಿ’ ಎಂದು ಒಬ್ಬರು ಕಮೆಂಟ್ ಮಾಡಿದರೆ, ‘ಬಹಳ ಚೆನ್ನಾಗಿದೆ, ಹೀಗೆ ಪದೇ ಪದೇ ಕರೆ ಮಾಡುವ ಜನರಿಗೆ ಹೀಗೆ ಆಗಬೇಕು’ ಎಂದು ಇನ್ನೊಬ್ಬರು ಕಾಮೆಂಟ್ ಮಾಡಿದ್ದಾರೆ.