ಜನಸ್ಪಂದನ ನ್ಯೂಸ್, ತುಮಕೂರು : ಜಿಲ್ಲೆಯ ಗೊಲ್ಲರಹಟ್ಟಿ ಗ್ರಾಮದಲ್ಲಿ ಮೂಢನಂಬಿಕೆಗೆ ನವಜಾತ ಶಿಶುವೊಂದು ಸಾವನ್ನಪ್ಪಿದ ದುರ್ಘಟನೆ ಇಂದು (ಜು.26) ನಡೆದಿದೆ.
ಕಾಡುಗೊಲ್ಲ ಸಮುದಾಯದ ಕಟ್ಟುಪಾಡಿಗೆ ವಸಂತ ಎಂಬವರ ಅವಳಿ ಮಕ್ಕಳಲ್ಲಿ 10 ದಿನಗಳ ಹೆಣ್ಣು ಮಗುವೊಂದು ಮೃತಪಟ್ಟಿದೆ ಎಂದು ತಿಳಿದುಬಂದಿದೆ.
ವಸಂತ ಅವರಿಗೆ ಕಳೆದ ಕೆಲವು ದಿನಗಳ ಹಿಂದೆಷ್ಟೇ ತುಮಕೂರು ಜಿಲ್ಲಾಸ್ಪತ್ರೆಯಲ್ಲಿ ಹೆರಿಗೆ ಆಗಿತ್ತು. ಹೆರಿಗೆ ಮುಗಿಸಿ ಗ್ರಾಮಕ್ಕೆ ವಾಪಸ್ಸಾದ ಇವರನ್ನು ಪೋಷಕರು ಮನೆಗೆ ಸೇರಿಸಿಕೊಂಡಿರಲಿಲ್ಲ. ದೇವರಿಗೆ ಸೂತಕ ಆಗಲ್ಲ, ಹಾಗಾಗಿ ನಾವು ಮನೆಯೊಳಗೆ ಕರೆದುಕೊಂಡು ಹೋಗುವುದಿಲ್ಲ ಎಂದು ಊರ ಹೊರಗಿನ ಗುಡಿಸಲಿಗೆ ಕಳುಹಿಸಿದ್ದರು.
ಕಳೆದ ಜುಲೈ 18ರಂದು ಊರ ಹೊರಗಿನ ಗುಡಿಸಿಲಿನಲ್ಲಿ ಬಾಣಂತಿ ಹಾಗೂ ಇಬ್ಬರು ಅವಳಿ ಮಕ್ಕಳನ್ನು ಇರಿಸಲಾಗಿತ್ತು. ಕಳೆದ 15 ದಿನಗಳಿಂದ ಜಿಲ್ಲೆಯಲ್ಲಿ ಶೀತ ವಾತಾವರಣ ಹಾಗೂ ತುಂತುರು ಮಳೆ ಆಗುತ್ತಿದೆ. ಇದರಿಂದಾಗಿ ಮಗು ಮೃತಪಟ್ಟಿದೆ ಎನ್ನಲಾಗಿದೆ.
ಕಾಡುಗೊಲ್ಲ ಸಮುದಾಯದವರು ಬಾಣಂತಿಯರನ್ನು ಗ್ರಾಮದ ಒಳಗೆ ಸೇರಿಸದೆ ಊರವರೆಗಿನ ಗುಡಿಸಲಿನಲ್ಲಿ ವಾಸ ಮಾಡಲು ಸೂಚಿಸುತ್ತಾರೆ. ಇದು ಹಿಂದಿನಿಂದಲೂ ನಡೆದುಕೊಂಡು ಬಂದಿರುವ ಕಟ್ಟುಪಾಡು.
ನಮ್ಮ ದೇವರಿಗೆ ಸೂತಕ ಆಗಲ್ಲ, ಹಾಗಾಗಿ ನಾವು ಮನೆಯೊಳಗೆ ಬಾಣಂತಿ ಹಾಗೂ ಮಗುವನ್ನು ಬಿಟ್ಟುಕೊಳ್ಳುವುದಿಲ್ಲ ಎನ್ನುತ್ತಾರೆ ಗೊಲ್ಲ ಸಮುದಾಯದ ಜನರು. ಸೂತಕದ ಬಾಣಂತಿ ಊರಿಗೆ ಬಂದರೆ ಕೇಡು, ಜುಂಜಪ್ಪ ಹಾಗೂ ಯತ್ತಪ್ಪ ದೇವರಿಗೆ ಇದು ಆಗಲ್ಲ ಎಂಬುದು ಗ್ರಾಮಸ್ಥರ ನಂಬಿಕೆ. ಆದರೆ ಈ ಮೂಢನಂಬಿಕೆಯಿಂದಾಗಿ ತಾಯಿಯೊಬ್ಬಳು ತನ್ನ ಪುಟ್ಟ ಮಗುವನ್ನು ಕಳೆದುಕೊಂಡಿದ್ದಾಳೆ.