ಎಟಿಎಂ ಕಳ್ಳತನಕ್ಕೆ ಜೆಸಿಬಿ ಮಷಿನ್‌ನನ್ನೆ ತಂದ ಖತರ್ನಾಕ ಕಳ್ಳರು.!

ಜನಸ್ಪಂದನ ನ್ಯೂಸ್, ಶಿವಮೊಗ್ಗ : ಕದ್ದು ತಂದಿದ್ದ ಜೆಸಿಬಿ (JCB) ಬಳಸಿ ಖತರ್ನಾಕ್ ಕಳ್ಳರು ಎಟಿಎಂ (ATM) ಕಳ್ಳತನಕ್ಕೆ ಯತ್ನಿಸಿರುವ ಘಟನೆ ಶಿವಮೊಗ್ಗದಲ್ಲಿ (Shivamogga) ಮಂಗಳವಾರ ರಾತ್ರಿ ನಡೆದಿದೆ.

ಶಿವಮೊಗ್ಗದ ವಿನೋಬನಗರ ನಗರದ ಮುಖ್ಯರಸ್ತೆಯ ಶಿವಾಲಯದ ಮುಂಭಾಗದ ಆಯಕ್ಸಿಸ್ ಬ್ಯಾಂಕ್ ಎಟಿಎಂನಲ್ಲಿ ಕಳ್ಳ ಜೆಸಿಬಿ ಬಳಸಿ ಎಟಿಎಂನ ಮುಂಭಾಗದ ಗಾಜು ಪುಡಿ ಮಾಡಿದ್ದಾನೆ.

ಬಳಿಕ ಜೆಸಿಬಿಯ ಮುಂದಿನ ಬಕೆಟ್ನಿಂದ ಎಟಿಎಂ ಮಷಿನ್ ಎತ್ತಿಕೊಳ್ಳುವ ಪ್ರಯತ್ನ ನಡೆಸಿದ್ದಾನೆ. ಆದರೆ ಮಷಿನ್ ನೆಲದಿಂದ ಹೊರಕ್ಕೆ ಬಂದಿಲ್ಲ.

ರಾತ್ರಿ ಗಸ್ತು ಪೊಲೀಸರು ಬರುತ್ತಿದ್ದಂತೆ ಸ್ಥಳದಲ್ಲೇ ಜೆಸಿಬಿ ಬಿಟ್ಟು ದುಷ್ಕರ್ಮಿಗಳು ಪರಾರಿಯಾಗಿದ್ದಾರೆ. ತಕ್ಷಣ ಕಾರ್ಯಪ್ರವೃತ್ತರಾದ ಪೊಲೀಸರು ಜೆಸಿಬಿಯನ್ನು ವಶಕ್ಕೆ ಪಡೆದಿದ್ದಾರೆ.

ಕುತೂಹಲಕಾರಿ ಘಟನೆ ಎಂದರೆ, ಚಾಲಾಕಿ ಖದೀಮರು ನಿಲ್ಲಿಸಿದ್ದ ಜೆಸಿಬಿಯನ್ನೇ ಕದ್ದು ಚಲಾಯಿಸಿಕೊಂಡು ತಂದು ಹಣ ದೋಚಲು ಮುಂದಾಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಘಟನೆ ಕುರಿತು ವಿನೋಬನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಅಕ್ಕಪಕ್ಕದ ಸಿಸಿ ಕ್ಯಾಮರಾ ಪರಿಶೀಲಿಸಿ ತನಿಖೆ ಮುಂದುವರೆಸಲಾಗುವುದು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.