‘ಹೆಬ್ಬುಲಿ’ ಹೇರ್ ಸ್ಟೈಲ್ ಮಾಡಬೇಡಿ : ಸಲೂನ್ ಮಾಲೀಕರಿಗೆ ಮುಖ್ಯಶಿಕ್ಷಕರಿಂದ ಮನವಿ ; ವೈರಲ್ ಆಯ್ತು ಪತ್ರ.!

ಜನಸ್ಪಂದನ ನ್ಯೂಸ್, ಬಾಗಲಕೋಟೆ : ಬಾಗಲಕೋಟೆ ಜಿಲ್ಲೆಯ ರಬಕವಿ-ಬನಹಟ್ಟಿ ತಾಲೂಕಿನ ಕುಲಹಳ್ಳಿಯಲ್ಲಿ ಸಲೂನ್ ಮಾಲೀಕರಿಗೆ ಶಾಲಾ ಮುಖ್ಯಶಿಕ್ಷಕರು ಮನವಿ ಪತ್ರ ಬರೆದ ಅಪರೂಪದ ಘಟನೆ ನಡೆದಿದೆ.

ಹೌದು, ವಿದ್ಯಾರ್ಥಿಗಳ ‘ಹೆಬ್ಬುಲಿ’ ಹೇರ್ ಸ್ಟೈಲ್ ನೋಡಿ ಶಿಕ್ಷಕರು ಬೇಸತ್ತು ಹೋಗಿದ್ದು, ಆ ರೀತಿ ಕಟಿಂಗ್ ಮಾಡದಂತೆ ಮನವಿ ಪತ್ರ ಬರೆದಿದ್ದಾರೆ.

ಶಿವಾಜಿ ನಾಯಕ ಎಂಬ ಮುಖ್ಯೋಪಾಧ್ಯಾಯರು ಕುಲಹಳ್ಳಿ ಗ್ರಾಮದ ಸಲೂನ್ ಅಂಗಡಿಗಳಿಗೆ ಈ ರೀತಿಯಾಗಿ ಪತ್ರ ಬರೆದಿದ್ದಾರೆ.

ನಮ್ಮ ಶಾಲೆಯ ಗಂಡುಮಕ್ಕಳು ಹೆಬ್ಬುಲಿ ಅಥವಾ ಇದೇ ತರಹದ ಹೇರ್ ಕಟಿಂಗ್ ಮಾಡಿಸಿಕೊಂಡು ಬರುತ್ತಿದ್ದಾರೆ. ತಲೆಯ ಒಂದು ಕಡೆ ಕೂದಲು ಬಿಟ್ಟು, ಇನ್ನೊಂದು ಕಡೆ ಕೂದಲು ಉಳಿಸಿಕೊಂಡು ಕಟಿಂಗ್ ಮಾಡಿಸಿಕೊಂಡು ಶಾಲೆಗೆ ಬರುತ್ತಿದ್ದಾರೆ‌.

ಇದರಿಂದ ವಿದ್ಯಾರ್ಥಿಗಳು ಕಲಿಕೆಯಲ್ಲಿ ಆಸಕ್ತಿ ತೋರಿಸುತ್ತಿಲ್ಲ.‌ ಶೈಕ್ಷಣಿಕ ಚಟುವಟಿಕೆಗಳಿಗೆ ಮಹತ್ವ ನೀಡುತ್ತಿಲ್ಲ. ಆದ್ದರಿಂದ ನಮ್ಮ ಶಾಲೆಯ ವಿದ್ಯಾರ್ಥಿಗಳಿಗೆ ಒಪ್ಪುವಂತ ಹೇರ್ ಕಟಿಂಗ್ ಮಾಡಲು ತಮ್ಮಲ್ಲಿ‌ ವಿನಂತಿಸುತ್ತೇನೆ. ಒಂದು ವೇಳೆ ವಿದ್ಯಾರ್ಥಿಗಳು ‘ಹೆಬ್ಬುಲಿ’ ಹೇರ್ ಕಟಿಂಗ್ ಮಾಡಲು ಒತ್ತಾಯ ಮಾಡಿದರೆ ಅಂತಹ ವಿದ್ಯಾರ್ಥಿಗಳ ಹೆಸರನ್ನು ನನಗೆ ಅಥವಾ ಪಾಲಕರ ಗಮನಕ್ಕೆ ತರುವಂತೆ ತಮ್ಮಲ್ಲಿ ಕೋರುತ್ತೇನೆ’ ಎಂದು ಶಿಕ್ಷಕರು ಪತ್ರ ಬರೆದಿದ್ದಾರೆ. ಶಿಕ್ಷಕರ ಈ ಪತ್ರ ಸದ್ಯ ವೈರಲ್ ಆಗಿದೆ.