ಜನಸ್ಪಂದನ ನ್ಯೂಸ್, ಬೆಳಗಾವಿ : ವಾರದ ಹಿಂದಷ್ಟೇ ಅಪ್ರಾಪ್ತೆಯನ್ನು ಅತ್ಯಾಚಾರ ಎಸಗಿದ್ದ ಆರೋಪಿಗೆ 20 ವರ್ಷ ಕಠಿಣ ಶಿಕ್ಷೆಯನ್ನು ವಿಧಿಸಿದ್ದ ಬೆಳಗಾವಿ ನ್ಯಾಯಾಲಯ ಇದೀಗ ಪ್ರತ್ಯೇಕ ಪ್ರಕರಣಗಳಲ್ಲಿ ಇನ್ನೂ ಇಬ್ಬರು ಆರೋಪಿಗಳಿಗೆ 20 ವರ್ಷಗಳ ಕಠಿಣ ಶಿಕ್ಷೆ ವಿಧಿಸಿ ತೀರ್ಪು ನೀಡಿದೆ.
ರಾಯಬಾಗದ ಆಶೀಷ್ ಧರ್ಮರಾಜ ಕಾಂಬಳೆ(25) ಮತ್ತು ಅರ್ಬಾಜ್ ರಸುಲ್ ನಾಲಬಂದ ಅವರೇ ಶಿಕ್ಷೆಗೆ ಗುರಿಯಾದವರು. ಇವರಿಬ್ಬರಿಗೂ ನ್ಯಾಯಾಲಯ 20 ವರ್ಷಗಳ ಕಠಿಣ ಶಿಕ್ಷೆ ವಿಧಿಸಿ ಸೋಮವಾರ ತೀರ್ಪು ನೀಡಿದೆ. ಜತೆಗೆ ತಲಾ 10 ಸಾವಿರ ದಂಡ ವಿಧಿಸಿ ತೀರ್ಪು ಪ್ರಕಟಿಸಿದೆ.
ಇದನ್ನು ಓದಿ : ಸ್ಮಾರ್ಟ್‌ಫೋನ್ ನಿಮ್ಮ ಆರೋಗ್ಯಕ್ಕೆ ಎಷ್ಟು ಅಪಾಯಕಾರಿ ಎಂದು ತಿಳಿಯಲು ಈ Code ಬಳಸಿ.!
2016ರ ಡಿಸೆಂಬರ್ 29 ರಂದು ಶಾಲೆಗೆ ತೆರಳಿ ಮನೆಗೆ ಮರಳಿ ಬರುವ ವೇಳೆ ಸಂಜೆ ಸುಮಾರಿಗೆ ಮನೆಯಿಂದ ಹೊರಗೆ ಬರಲು ತಿಳಿಸಿ ಅಪ್ರಾಪ್ತೆಯನ್ನು ಅಪಹರಿಸಿದ್ದ ಆಶೀಷ್ ಮಹಾರಾಷ್ಟ್ರದ ಗಣೇಶವಾಡಿಗೆ ಬೈಕ್ ನಲ್ಲಿ ಕರೆದು ಹೋಗಿ ನಂತರ ಮನೆಯೊಂದರಲ್ಲಿ ಕೂಡಿ ಹಾಕಿ ಅತ್ಯಾಚಾರ ನಡೆಸಿದ್ದ. ನಂತರ ಚಿಕ್ಕೋಡಿ ತಾಲೂಕು ಅಂಕಲಿವರೆಗೆ ವಾಪಸ್ ತಂದು ಬಿಟ್ಟು ನಾಪತ್ತೆಯಾಗಿದ್ದ.
ಈ ಕುರಿತು ಬಾಲಕಿ ತಂದೆ ರಾಯಬಾಗ ಪೊಲೀಸರಿಗೆ ದೂರು ನೀಡಿದ್ದರು. ಈ ಬಗ್ಗೆ ತನಿಖಾಧಿಕಾರಿ ಬಿ.ಎಸ್. ಲೋಕಾಪುರ ಮತ್ತು ಪ್ರೀತಮ್ ಶ್ರೇಯಕರ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು.
ಇನ್ನೊಂದು ಪ್ರತ್ಯೇಕ ಪ್ರಕರಣದಲ್ಲಿ 2018ರ ಮೇ 29ರಂದು ಅರ್ಬಾಜ್ ರಸೂಲ್ ನಾಲಬಂದ (19) ಅಪ್ರಾಪ್ತೆಯನ್ನು ನಿಮ್ಮ ಮನೆಗೆ ಕರೆದುಕೊಂಡು ಹೋಗುವುದಾಗಿ ಹೇಳಿ ಬಲವಂತವಾಗಿ ತನ್ನ ಬೈಕ್ ಮೇಲೆ ಕೂಡಿಸಿಕೊಂಡು ರಾಯಬಾಗ ತಾಲೂಕು ದಿಗ್ಗೇವಾಡಿ ಕ್ರಾಸ್ ಬಳಿಯ ಅರಣ್ಯ ಪ್ರದೇಶಕ್ಕೆ ಕರೆದುಕೊಂಡು ಹೋಗಿ ಅತ್ಯಾಚಾರ ಎಸಗಿದ್ದ. ಮಾತ್ರವಲ್ಲ ವಿಷಯ ಬಹಿರಂಗ ಮಾಡಬಾರದು ಎಂದು ಬೆದರಿಕೆಯೊಡ್ಡಿದ್ದ.
ಬಾಲಕಿಯ ತಾಯಿ ನೀಡಿದ್ದ ದೂರು ಆಧರಿಸಿ ತನಿಖೆ ಕೈಗೊಂಡ ಮಂಜುನಾಥ ನಡುವಿನಮನಿ ಮತ್ತು ಪ್ರೀತಮ್ ಶ್ರೇಯಕರ ಅವರು ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು.
ಇದನ್ನು ಓದಿ : ಒಮ್ಮೆ ನೀವೂ ನೋಡಲೇಬೇಕಾದ ಪುಟಾಣಿ ಹುಡುಗಿಯ Dance.!
ಎರಡು ಪ್ರಕರಣಗಳ ವಿಚಾರಣೆ ನಡೆಸಿದ ನ್ಯಾಯಾಧೀಶರಾದ ಸಿ.ಎಂ. ಪುಷ್ಪಲತಾ ಅವರು, ಆರೋಪ ಸಾಬೀತಾಗಿರುವ ಹಿನ್ನೆಲೆಯಲ್ಲಿ ಇದೀಗ ತೀರ್ಪು ಪ್ರಕಟಿಸಿದ್ದಾರೆ. ಇಬ್ಬರು ಸಂತ್ರಸ್ತೆಯರು ಜಿಲ್ಲಾ ಕಾನೂನು ಪ್ರಾಧಿಕಾರದಿಂದ ತಲಾ ಒಂದು ಲಕ್ಷ ರೂಪಾಯಿ ಪಡೆಯುವಂತೆ ಆದೇಶಿಸಿದ್ದಾರೆ. ಸರ್ಕಾರದ ಪರವಾಗಿ ವಿಶೇಷ ಸರಕಾರಿ ಅಭಿಯೋಜಕ ಎಲ್. ವಿ. ಪಾಟೀಲ ವಾದ ಮಂಡಿಸಿದ್ದರು.